ಪ್ಯೂರಿಟನ್ನರು	-	16 ಮತ್ತು 17ನೆಯ ಶತಮಾನಗಳಲ್ಲಿ ಇಂಗ್ಲೆಂಡ್ ಮತ್ತು ಇಂಗ್ಲಿಷ್ ಭಾಷೆ ಆಡುವ ಇತರ ದೇಶಗಳಲ್ಲಿ ಧಾರ್ಮಿಕ ಚಳವಳಿ ನಡೆಸಿದವರು. ಪ್ರಾಟೆಸ್ಟೆಂಟ್ ಧರ್ಮದ ಅತ್ಯಂತ ತೀವ್ರ ಪಂಥವೇ ಪ್ಯೂರಿಟನ್ ಎಂದು ಪರಿಗಣಿಸಲಾಗಿದೆ. ಇಂಗ್ಲೆಂಡಿನಲ್ಲಿ ಧಾರ್ಮಿಕ ಸುಧಾರಣೆಯ ಅನಂತರದ ಶತಮಾನವನ್ನು ಸ್ಥೂಲವಾಗಿ ಪ್ಯೂರಿಟನ್ ಚಳವಳಿಯ ಯುಗವೆಂದು ಹೇಳಬಹುದಾಗಿದೆ. ಒಂದನೆಯ ಎಲಿಜûಬೆತ್ ರಾಣೆಯ ಆಳ್ವಿಕೆಯ ಮೊದಮೊದಲು ವರ್ಷಗಳಿಂದ ಆರಂಭವಾಗಿ 1660ರವರೆಗೂ ಇದು ಹಬ್ಬಿತ್ತು. ಸ್ಟೂಯರ್ಟ್ ದೊರೆಗಳನ್ನು ಮತ್ತೆ ಸ್ಥಾಪಿಸಿದಾಗಲೆ ಪ್ಯೂರಿಟನ್ ರಾಜ್ಯವನ್ನು ರೂಪಿಸುವ ಪ್ರಯತ್ನ ಕೊನೆಗೊಂಡದ್ದು. ಅಮೆರಿಕದ ನ್ಯೂ ಇಂಗ್ಲೆಂಡಿನಲ್ಲಿ 1620ರಲ್ಲಿ ಮೊಟ್ಟಮೊದಲನೆಯ ನೆಲಸು ಸ್ಥಾಪಿತವಾದಂದಿನಿಂದ 1961ರವರೆಗೆ ಪ್ಯೂರಿಟನ್ ಚಳವಳಿ ಬಿರುಸಾಗಿತ್ತು. 

1560ರ ದಶಕದಲ್ಲಿ ಪ್ಯೂರಿಟನ್ ಎಂಬುದು ತಿರಸ್ಕಾರ ಸೂಚಕ ಪದವಾಗಿತ್ತು. ಎಲಿಜಬೆತ್ತಳ ವ್ಯವಸ್ಥೆಪ ಪ್ರಕಾರ ಇಂಗ್ಲೆಂಡಿನ ಚರ್ಚಿನಲ್ಲಿ ತರಲು ಉದ್ದೇಶಿಸಲಾಗಿದ್ದಕ್ಕಿಂತ ಹೆಚ್ಚು ಕೂಲಂಕಷ ಸುಧಾರಣೆಯನ್ನು ತರಬಯಸುತ್ತಿದ್ದವರನ್ನು ಪ್ಯೂರಿಟನ್ನರೆಂದು ಜರೆಯಲಾಗುತ್ತಿತ್ತು. ಹೆಚ್ಚು ತಡವಿಲ್ಲದೆ ಸುಧಾರಣೆ ತರಬಯಸಿ ಇಂಗ್ಲೆಂಡಿನ ಚರ್ಚಿನಿಂದ ಹೊರಬಿದ್ದವರನ್ನು ಹೀಗೆಂದು ಕರೆಯುತ್ತಿದ್ದರು. ಪ್ರಸ್ಬಿಟೇರಿಯನ್‍ಗಳೆಂದೂ ಸ್ವತಂತ್ರರೆಂದೂ ಇವರು ವಿಂಗಡವಾಗಿ ಕ್ಯಾಲ್ವಿನಿಸ್ಟರೊಂದಿಗೆ ಇಂಗ್ಲೆಂಡಿನ ಚರ್ಚಿನ ವಿರೋಧಿಗಳಾದರು. 

ಪ್ಯೂರಿಟನ್ ಕ್ರಾಂತಿ : ಇಂಗ್ಲೆಂಡಿನ ದೊರೆಗಳಾದ 1ನೆಯ ಜೇಮ್ಸ್ (1603-2) ಮತ್ತು 1ನೆಯ ಚಾಲ್ರ್ಸ್ (1625-49) ಇವರಿಗೂ ಇಂಗ್ಲೆಂಡಿನ ಮಧ್ಯಮ ವರ್ಗೀಯ ಪಾರ್ಲಿಮೆಂಟರಿ ಪಕ್ಷಕ್ಕೂ ನಡುವೆ ನಡೆದ ಘರ್ಷಣೆಯನ್ನೂ ಪ್ಯೂರಿಟನ್ ಕ್ರಾಂತಿಯೆಂದೇ ಕರೆಯಲಾಗಿದೆ. ಏಕೆಂದರೆ ಈ ಕ್ರಾಂತಿಯ ಫಲವಾಗಿ ಪ್ಯೂರಿಟನ್ನರ ಪ್ರಭಾವ ಬೆಳೆಯಿತು. ಆದರೆ, ಅವರು ತಂತಮ್ಮಲ್ಲೇ ಜಗಳವಾಡಿಕೊಂಡು ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡರು. 2ನೆಯ ಚಾಲ್ರ್ಸ್‍ನನ್ನು ಇಂಗ್ಲೆಂಡಿನ ದೊರೆಯಾಗಿ ಕುಳ್ಳಿರಿಸಿದಾಗ ಇವರ ಸಂಘಟಿತ ಚಳವಳಿ ಕೊನೆಗೊಂಡಿತು.

ರಾಣಿ ಎಲಿಜಬೆತ್ ಸ್ಥಾನಕ್ಕೆ 1603ರಲ್ಲಿ ಬಂದವನು ಸ್ಟೂಯರ್ಟ್ ದೊರೆ 1ನೆಯ ಜೇಮ್ಷ್. ಪ್ಯೂರಿಟನ್ ಪ್ರತಿಭಟನೆಯ ಜೊತೆಗೆ ದೊರೆಯ ದೈವೀಹಕ್ಕಿನ ಪ್ರತಿಪಾದನೆಗೂ ಪಾರ್ಲಿಮೆಂಟಿನ ಅಧಿಕಾರದ ಪ್ರತಿಪಾದನೆಗೂ ನಡುವೆ ಹುಟ್ಟಿದ ಘರ್ಷಣೆ ಆಗ ಸೇರಿಕೊಂಡಿತು. ದೊರೆಯ ಅನುಗ್ರಹವನ್ನೊಪ್ಪದ ಪಾರ್ಲಿಮೆಂಟಿನ ಮಧ್ಯಮ ವರ್ಗೀಯರು ಕಾನೂನಿನ ಪ್ರಕಾರ ತಮ್ಮ ಹಕ್ಕನ್ನು ಸ್ಥಾಪಿಸಬಯಸಿದರು.

ದೊರೆಯ ಮತ್ತು ಪಾರ್ಲಿಮೆಂಟಿನ ಸಂವಿಧಾನ ಬದ್ಧವಾದ ಹಕ್ಕು ಬಾದ್ಯತೆಗಳೇನು ಎಂಬ ಸಮಸ್ಯೆ ಇತ್ಯರ್ಥವಾಗುವ ಸಮಯದಲ್ಲೇ ಧಾರ್ಮಿಕ ಸಮಸ್ಯೆಗಳು ಗಡಿಬಿಡಿಯೂ ಪ್ರಬಲವಾಗಿದ್ದದ್ದು ಈ ಸನ್ನಿವೇಶದಲ್ಲಿ ಪ್ಯೂರಿಟನ್‍ಗಳು ಮುಂದೆ ಬಂದರು. ಪ್ರಾಟೆಸ್ಟಂಟ್ ಗುಂಪಿನ ತೀವ್ರ ಪಂಥದವರು ಇವರು. ಆಂಗ್ಲಿಕನ್ ಚಚ&ನ್ನು ರೋಮನ್ ಪ್ರಭಾವದಿಂದ ಮತ್ತಷ್ಟು ಪರಿಶುದ್ಧಗೊಳಿಸುವುದು. ಧಾರ್ಮಿಕ ಕರ್ಮಗಳನ್ನು ಸುಲಭಗೊಳಿಸುವುದು, ದೊರೆಗಳಿಂದ ಆರಿಸಲ್ಪಟ್ಟ ಬಿಷೆಪ್ಪುಗಳ ಅಧಿಕಾರವನ್ನು ಸಂಕುಚಿತಗೊಳಿಸುವುದು - ಈ ಕಾರ್ಯಕ್ರಮಗಳು ಇವರ ಧ್ಯೇಯಗಳಾಗಿದ್ದವು. ವ್ಯಾಪಾರವೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿ ಮುಖ್ಯವಾಗಿ ಪಟ್ಟಣಗಳಲ್ಲಿದ್ದ ಈ ಜನರು ಮಧ್ಯಮ ವರ್ಗದವರು.

ಜೇಮ್ಸ್ ದೊರೆ ಅಕ್ರಮವಾಗಿ, ಅನ್ಯಾಯವಾಗಿ ತೆರಿಗೆಗಳನ್ನು ವಿಧಿಸುವುದನ್ನು ವ್ಯಾಪಾರಿಗಳು ಪ್ರತಿಭಟಿಸಿದರು. ಕ್ಯಾತೊಲಿಕ್ ಪಂಥದ ಹಾದಿಯಲ್ಲಿ ಪ್ರಧಾನ ಚರ್ಚುಗಳು ಸಾಗುವುದನ್ನು ದೊರೆ ಅನುಮೋದಿಸುತ್ತಿದ್ದ. ಅವರು ಈ ದೋರಣೆಯನ್ನು ಖಂಡಿಸಿದರು. ಅಕ್ರಮವಾದ ತೆರಿಗೆ ವಿಧಿಸುವುದು, ಕ್ಯಾತೊಲಿಕ್ ಪಂಥದ ಬಗ್ಗೆ ಸಹಾನುಭೂತಿ, ದೊರೆಗೆ ಹಕ್ಕುಭಾಧ್ಯತೆಗಳಿರಬೇಕೆನ್ನುವ ಮನೋಭಾವ ಇವು ಮುಂದಿನ ಅಂತರ್ಯುದ್ಧಕ್ಕೆ ಪೀಠಿಕೆಗಳಾದವು. ದೊರೆ ಹೊರಗಿನ ಪ್ರಾಟೆಸ್ಟಂಟರಿಗೆ ಸಹಾಯವನ್ನು ನಿರಾಕರಿಸಿದನಲ್ಲದೆ, ಸ್ಪೇನ್ ದೇಶದ ಕ್ಯಾತೊಲಿಕ್ ಪಂಥದವರ ಬಗ್ಗೆ ಅಪಾರ ಅಭಿಮಾನ ತೋರಿದ. ದೇಶದ ಅಂತರಿಕ ಮತ್ತು ವಿದೇಶಾಂಗ ನೀತಿಯ ಬಗ್ಗೆ ಆಕ್ಷೇಪಣೆಗಳನ್ನು ಅವನು ಗಮನಿಸಲಿಲ್ಲ. ಇವೆಲ್ಲ ಮುಂದಿನ ಹಗರಣಕ್ಕೆ ಕಾರಣವಾದವು.

ಜೇಮ್ಸ್ 1625ರಲ್ಲಿ ಮೃತಿ ಹೊಂದಿದ. ಅವನ ಮಗ 1ನೆಯ ಚಾಲ್ರ್ಸ್ ಪಟ್ಟಕ್ಕೇರಿದ. ಇವನು ತಂದೆಯನ್ನೂ ಮೀರಿಸಿದ. ಅವನ ತಪ್ಪುಗಳನ್ನೇ ಮುಂದುವರಿಸಿದ. ಇತಿಮಿತಿಯಿಲ್ಲದ ಅಧಿಕಾರಕ್ಕಾಗಿ ಒತ್ತಾಯಪಡಿಸಿದ. ದೊರೆತನದ ಮತ್ತು ಪಾರ್ಲಿಮೆಂಟಿನ ಅಧಿಕಾರ ವ್ಯಾಪ್ತಿ ಕುರಿತ ಘರ್ಷಣೆಯಿಂದಲೇ ಇವನ ಆಳ್ವಿಕೆ ಪ್ರಾರಂಭವಾಯಿತು. ಇದು ಉಗ್ರ ಚರ್ಚೆಗೆ ಆಸ್ಪದ ನೀಡಿತು. ಪಾರ್ಲಿಮೆಂಟು ಅವನ ಅಧಿಕಾರವನ್ನು ಮೊಟಕುಗೊಳಿಸಲು ಎಲ್ಲ ಪ್ರಯತ್ನವನ್ನೂ ಮಾಡಿತು. ಪ್ರಜೆಗಳ ಹಕ್ಕು ಭಾದÀ್ಯತೆಯ ಮತ್ತು ಸ್ವಾತಂತ್ರ್ಯದ ಘೋಷಣೆಗೆ ಸಹಿ ಹಾಕಿದಾಗಲೇ, ಅದಕ್ಕೆ ದೊರೆ ಒಪ್ಪಿದಾಗಲೇ ಪಾರ್ಲಿಮೆಂಟ್ ಅವನ ಹಣದ ಬೇಡಿಕೆಯನ್ನು ಒಪ್ಪಿದ್ದು. ಅದರೂ ಚಾಲ್ರ್ಸ್ ಪಾರ್ಲಿಮೆಂಟಿನ ಒಪ್ಪಿಗೆ ಇಲ್ಲದ ತೆರಿಗೆ ವಿಧಿಸಿದ. ಪಾರ್ಲಿಮೆಂಟನ್ನೇ ವಿಸರ್ಜಿಸಿ ಹನ್ನೊಂದು ವರ್ಷ ಕಾಲ ಸ್ವತಂತ್ರವಾಗಿ ಆಳಿದ ಕಾಮನ್ ಸಭೆಯ ಪ್ಯೂರಿಟನ್‍ಗಳನ್ನು ಅವರ ರಾಜಕೀಯ ಮತ್ತು ಧಾರ್ಮಿಕ ಭಾವನೆಗಳಿಗಾಗಿ ಬಂಧಿಸಿ ಸೆರೆಯಲ್ಲಿಡಿಸಿದ. 

ಚಾಲ್ರ್ಸ್ ದೊರೆಯ ಈ ಬಡಿವಾರ ಬಹುದಿನ ಇರಲಿಲ್ಲ. 1640ರಲ್ಲಿ ಇದು ಮೊಟಕಾಯಿತು. ತನ್ನ ಧಾರ್ಮಿಕ ಭಾವನೆಗಳನ್ನು ಪ್ರೆಸ್ಬಿಟೇರಿಯನ್ ಸ್ಕಾಟ್‍ಗಳ ಮೇಲೆ ಒತ್ತಾಯಪಡಿಸಲು ಮತ್ತು ಸ್ಕಾಟ್ ದಾಳಿಯನ್ನು ಎದುರಿಸಲು ಹಣಕ್ಕಾಗಿ ಇವನು ಪಾರ್ಲಿಮೆಂಟನ್ನು ಕರೆಯಬೇಕಾಗಿ ಬಂದಿತು. ಪಾರ್ಲಿಮೆಂಟಿನ ಈ ಅಧಿವೇಶನ ಸುಮಾರು ಇಪ್ಪತ್ತು ವರ್ಷ ಕಾಲ ನಡೆದಿದ್ದರಿಂದ ಇದು ಲಾಂಗ್ ಪಾರ್ಲಿಮೆಂಟ್ ಎಂದು ಪ್ರಸಿದ್ಧವಾಯಿತು. ದೊರೆಯ ದೌರ್ಬಲ್ಯವನ್ನು ಪಾರ್ಲಿಮೆಂಟ್ ಅರಿತುಕೊಂಡು ತನ್ನ ಅಧಿಕಾರ ದೊರೆಯ ಅಧಿಕಾರಕ್ಕೆ ಸಮಾನವಾಗಿರುವಂತೆ ಮಾಡಲು ಉದ್ಯುಕ್ತವಾಯಿತು. ಆಗ ಆದ ಸುಧಾರಣೆಗಳು ಪಾರ್ಲಿಮೆಂಟಿನ ಮಹಾ ವಿಜಯದ ಸಂಕೇತಗಳು.

ಆಗ, ಧಾರ್ಮಿಕ ಗೊಂದಲವೆದ್ದಿತು. ಪ್ರಾಟೆಸ್ಟಂಟ್ ಧರ್ಮ ಅನುಸರಿಸಬೇಕಾಗ ಪದ್ಧತಿಯ ಬಗ್ಗೆ ಒಮ್ಮತ ಇರಲಿಲ್ಲ. ಇದರಿಂದ ಎರಡು ವಿರುದ್ಧ ಪಕ್ಷಗಳು ರೂಪುಗೊಂಡವು. ಪಾರ್ಲಿಮೆಂಟರಿ ಅಥವಾ ರೌಂಡೆ ಹೆಡ್ ಎಂಬ ಪಕ್ಷದಲ್ಲಿ ಬಹುವಾಗಿ ಮಧ್ಯಮ ತರಗತಿಯವರೇ ಇದ್ದರು. ಇವರಲ್ಲಿ ಅನೇಕರು ಪ್ಯೂರಿಟನ್‍ಗಳಾಗಿದ್ದರು. ಪ್ಯೂರಿಟನ್‍ಗಳಲ್ಲಿ ಒಳಭೇದಗಳಾದವು. ಇವರಲ್ಲಿ ಎರಡು ಗುಂಪುಗಳಾದವು. ಸ್ವತಂತ್ರರದು ಒಂದು ಗುಂಪು. ಪ್ರಿಸ್ಬಿಟೇರಿಯನ್ನರದು ಇನ್ನೊಂದು ಗುಂಪು. ಚರ್ಚಿನ ಆಡಳಿತದ ವಿಚಾರವಾಗಿ ಇವರಲ್ಲಿ ಭಿನ್ನಾಭಿಪ್ರಾಯವಿತ್ತು. ಆದರೆ, ಕ್ಯಾಲ್ವಿನಿಸ್ಟಿಕ್ ಧಾರ್ಮಿಕ ಪದ್ಧತಿಯಲ್ಲಿ ಉಭಯತ್ರರು, ವಿಶ್ವಾಸವನ್ನಿಟ್ಟಿದ್ದರಲ್ಲದೆ, ದೊರೆಯ ರಾಜಕೀಯ ಧಾರ್ಮಿಕ ಮಿಶ್ರಣದ ಅಧಿಕಾರವನ್ನು ಮೊಟಕು ಮಡಬೇಕೆನ್ನುವ ವಿಚಾರಕ್ಕೂ ಸಮ್ಮತಿಸಿದರು ದೊರೆಯ ಹಿಂಬಾಲಕರು ಕೆವೆಲಿಯರ್ಸರು. ಇವರ ಪಕ್ಷಕ್ಕೆ ದೊಡ್ಡ ಜಮೀನುದಾರರ ಬೆಂಬಲವಿತ್ತು. ಇವರು ಪ್ರಾಟೆಸ್ಟೆಂಟ್ ಮತದ ತೀವ್ರತೆಯನ್ನು ವಿರೋಧಿಸುತ್ತಿದ್ದರು. ದೊರೆಯ ನಿರಂಕುಶ ಅಧಿಕಾರವನ್ನು ವಿರೋಧಿಸುವುದರಲ್ಲಿ ಇವರು ಪ್ಯೂರಿಟನ್ನರೊಡನೆ ಒಂದಾಗಿದ್ದರೂ ದೊರೆಯಿಂದ ಎಲ್ಲ ಅಧಿಕಾರಗಳನ್ನೂ ಕಸಿದುಕೊಳ್ಳಬೇಕೆಂಬುದನ್ನು ಇವರು ಒಪ್ಪಿಕೊಳ್ಳುತ್ತಿರಲಿಲ್ಲ. 1642ರಲ್ಲಿ ರೌಂಡ್ ಹೆಡ್‍ಗಳಿಗೂ ಕೆವೆಲಿಯರ್‍ಗಳಿಗೂ ಘರ್ಷಣೆ ಆರಂಭವಾಗಿ ಯುದ್ಧದಲ್ಲಿ ಪರ್ಯವಸಾನವಾಯಿತು. ಏಳು ವರ್ಷಗಳವರೆಗೆ ಯುದ್ಧ ನಡೆಯಿತು. 1646ರಲ್ಲಿ ದೊರೆಯ ಸೈನ್ಯಕ್ಕೆ ಪರಾಜಯವಾಯಿತು. ರೌಂಡ್‍ಗಳಿಗೆ ಎಲ್ಲ ರೀತಿಯ ಸೌಲಭ್ಯಗಳಿಗೂ ಸೌಕರ್ಯಗಳಿಗೂ ಜತೆಗೆ ಸ್ಕಾಟ್‍ಗಳ ಸಹಾಯವೂ ದೊರೆತದ್ದರಿಂದ ಅವರ ಜಯ ಸುಲಭವಾಯಿತು. ಎರಡು ವರ್ಷಗಳ ವರೆಗೆ ದೊರೆ ಚಾಲ್ರ್ಸ್ ತನ್ನ ಮೂವರು ಶತ್ರುಗಳಲ್ಲಿ ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟಿ ಕಾಲ ಕಳೆದು ಕಡೆಗೆ ಪಾರ್ಲಿಮೆಂಟನ್ನು ಒಡಕಿಗೆ ಗುರಿ ಮಾಡಿ, ಅ ಪ್ರಯತ್ನದಲ್ಲಿ ಯಶಸ್ವಿಯಾದ. ಸ್ಕಾಟ್‍ಗಳೊಡನೆ ಮೈತ್ರಿ ಸಾಧಿಸಿದ ಪರಿಣಾಮವಾಗಿ ಸ್ವತಂತ್ರ ಸೇನೆಯಲ್ಲಿ (ಪಾರ್ಲಿಮೆಂಟಿನ ಸೇನೆ) ಅಸಮಾಧಾನ ಬೆಳೆಯಿತು. 1648ರಲ್ಲಿ ಮತ್ತೊಂದು ಅಂತರ್ಯುದ್ಧವಾಯಿತು. ದೊರೆಯ ಮಿತ್ರಪಕ್ಷದವರಿಗೆ ಸೋಲಾಯಿತು. ಕಾಮನ್ಸ್ ಸಭೆಯಲ್ಲಿದ್ದ ಪ್ರಿಸ್ಬಿಟೇರಿಯನ್ ಗುಂಪಿನ ಉಚ್ಚಾಟನೆ ಆಯಿತು. ವಿಚಾರಣೆಯ ಅನಂತರ ದೊರೆ ಚಾಲ್ರ್ಸ್‍ನನ್ನು 1649ರಲ್ಲಿ ಗಲ್ಲಿಗೇರಿಸಲಾಯಿತು. ಮುಂದೆ ಹನ್ನೊಂದು ವರ್ಷಗಳ ತನಕ ಕಾಮನ್‍ವೆಲ್ತ್ ಎಂಬ ಹೆಸರಿನಲ್ಲಿ ಇಂಗ್ಲೆಂಡು ಗಣರಾಜ್ಯವಾಯಿತು. 

ದೊರೆಯಿಲ್ಲದ ಈ ದೇಶದಲ್ಲಿ ಜನರು ನೆಮ್ಮದಿ ಗಳಿಸಲಿಲ್ಲ. ಹಿಂದಿನ ದೊರೆಯ ಮೇಲೆ ಬಂಡಾಯ ಬಿದ್ದು ಸ್ವಾತಂತ್ರ್ಯ ಪ್ರತಿಪಾದಕರೆಂದು ಕರೆಸಿಕೊಂಡ ಪ್ಯೂರಿಟನ್ನರೇ ಇಂಗ್ಲಿಷ್ ಗಣರಾಜ್ಯವನ್ನು ಚಾಲ್ರ್ಸ್ ದೊರೆಗಿಂತ ಹೆಚ್ಚಿನ ನಿರಂಕುಶ ಮನೋಪ್ರವೃತ್ತಿಯಿಂದ ಆಳಿದರು. ಅಗ್ಗೆ ಆಲಿವರ್ ಕ್ರಾಮ್‍ವೆಲ್ ಎಂಬೊಬ್ಬ ಮಹಾ ಸಾಹಸಿ, ಸ್ವತಂತ್ರ ನಾಯಕ, ಸೈನಿಕ ಮೇಧಾವಿ ಅಧಿಪತಿಯಾದ. ಅವನು ಸರ್ವಾಧಿಕಾರಿಯಾದ. ಅವನು ಪ್ಯೂರಿಟನ್ ಗುಂಪಿನ ಪ್ರಮುಖ. ತೀವ್ರವಾದಿಗಳಾದ ಪ್ಯೂರಿಟನ್ನರು ಜನರ ಮೇಲೆ ನಾನಾ ನಿರ್ಬಂಧಗಳನ್ನು ಹೊರಿಸಿದರು. ಜನರಿಗೆ ವಿನೋದದಲ್ಲಿ ಕಾಲ ಕಳೆಯಲು ಆಸ್ಪದವಿಲ್ಲವಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಯಿತು. 1659ರಲ್ಲಿ ಆಲಿವರ್ ಕ್ರಾಮ್‍ವೆಲ್ ತೀರಿಕೊಂಡ. ಅವನ ತರುವಾಯ ಕ್ರಾಮ್‍ವೆಲ್ ಅಧಿಕಾರಕ್ಕೆ ಬಂದ. ಒಂದು ವರ್ಷದೊಳಗಾಗಿ ಇವನು ಅಧಿಕಾರ ತ್ಯಜಿಸಬೇಕಾಯಿತು. ಸಂಪ್ರದಾಯ ಪದ್ಧತಿಗಳೆಲ್ಲ ಮೂಲೆ ಪಾಲಾದುವು. ಕ್ರಾಂತಿಯಿಂದ ಸರ್ವನಾಶವಾಯಿತು ಎಂದು ಜನರಿಗೆ ಎನಿಸಿತ್ತು. ಇಂಥ ಸನ್ನಿವೇಶದಲ್ಲಿ ಮತ್ತೆ ರಾಜಪ್ರಭುತ್ವ ಬಂತು. ಹಿಂದಿನ ದೊರೆಯ ಮಗನಾದ 2ನೆಯ ಚಾಲ್ರ್ಸ್ ಇಂಗ್ಲೆಂಡಿನ ದೊರೆಯಾದ (1660). ಅವನಿಗೆ ಪಟ್ಟ ಕಟ್ಟುವ ಮುನ್ನ ಅವನಿಂದ ಸೂಕ್ತ ಭರವಸೆಯೊಂದನ್ನು ಪಡೆಯಲಾಯಿತು. ತನ್ನ ಅಪ್ಪ ತಾತಂದಿರಂತೆ ರಾಜ್ಯವಾಳದೆ ಪಾರ್ಲಿಮೆಂಟಿನ ಇಚ್ಛೆಯಂತೆ ಆಳತಕ್ಕದ್ದೆಂಬುದೇ ಈ ಭರವಸೆ.

ಈ ಕ್ರಾಂತಿಗೆ ಮುಖ್ಯ ಕಾರಣರಾಗಿದ್ದವರು ಪ್ಯೂರಿಟನ್ನರು. ವರ್ತಕರೂ, ವಕೀಲರೂ, ವೈದ್ಯರೂ, ಅಂಗಡಿಕಾರರೂ, ಬ್ಯಾಂಕರುಗಳೂ ಒತ್ತಟ್ಟಿಗೆ ಕಲೆತು ಆಡಳಿತದಲ್ಲಿ ಪೂರ್ಣ ಬದಲಾವಣೆಗಾಗಿ ಶ್ರಮಿಸಿದರು. ಪ್ಯೂರಿಟನ್ನರು ಹೂಡಿದ ಚಳವಳಿಯಲ್ಲಿ ಅದರಿಂದ ಉಂಟಾದ ಕ್ರಾಂತಿಯಲ್ಲಿ, ಧಾರ್ಮಿಕ ಆಂಶಗಳೇ ಪ್ರಧಾನವಾಗಿ ಕಾಣಬಂದರೂ ಪಟ್ಟಣಗಳಲ್ಲಿನ ಮಧ್ಯಮ ವರ್ಗದವರು ಈ ಎರಡೂ ಘಟನೆಗಳಿಗೆ ತಮ್ಮ ಅತ್ಯಧಿಕ ಬೆಂಬಲ ನೀಡಿದರು. ಪ್ಯೂರಿಟನ್ನರ ಗುಂಪಿನ ಈ ಮಧ್ಯಮ ವರ್ಗದವರ ಪ್ರಭಾವ ಪಾತ್ರಗಳೇ ಅತಿಶಯವಾಗಿದ್ದವು. 										(ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ